ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ 
ಭಾರತದ ಸಾರ್ವಜನಿಕ ಕ್ಷೇತ್ರದಲ್ಲಿ ಸ್ಥಾಪನೆಯಾದ ಮೊಟ್ಟಮೊದಲ ಉದ್ಯಮ. ಬ್ರಿಟನ್ನಿನ ಆಟೋಮ್ಯಾಟಿಕ್ ಟೆಲಿಫೋನ್ ಅಂಡ್ ಎಲೆಕ್ಟ್ರಿಕ್ ಕಂಪನಿ ಲಿಮಿಟೆಡ್ ಸಂಸ್ಥೆಯ ತಾಂತ್ರ್ರಿಕ ನೆರವಿನಿಂದ ಒಂದು ಕಾರ್ಖಾನೆಯನ್ನು ಸ್ಥಾಪಿಸಲು ಭಾರತ ಸರ್ಕಾರ ತೀರ್ಮಾನಿಸಿ, 1948ರ ಮೇ ತಿಂಗಳಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿತು. ಅನಂತರ ಕಾರ್ಖಾನೆ ಬೆಂಗಳೂರಿನಲ್ಲಿ ಸ್ಥಾಪನೆಗೊಂಡಿತು. 15 ವರ್ಷಗಳವರೆಗಿನ ಒಪ್ಪಂದದ ಅವಧಿ ಮುಕ್ತಾಯವಾದದ್ದು 1963ರಲ್ಲಿ. ಇದನ್ನು 1950ರಲ್ಲಿ ಒಂದು ಖಾಸಗೀ ಸಂಸ್ಥೆಯನ್ನಾಗಿ ಪರಿವರ್ತಿಸಲಾಯಿತು. 200 ಲಕ್ಷ ರೂಪಾಯಿಗಳ ಬಂಡವಾಳದಿಂದ ಪ್ರಾರಂಭಮಾಡಿ ಈ ಮೊತ್ತವನ್ನು 1954ರಲ್ಲಿ 400 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿ ಅನಂತರ 1964ರಲ್ಲಿ 500 ಲಕ್ಷ ರೂಪಾಯಿಗಳಿಗೆ ಏರಿಸಲಾಯಿತು. ಈ ಸಂಸ್ಥೆಯ ಪಾಲುಗಳಲ್ಲಿ 90%ರಷ್ಟು ಭಾರತದ ಕೇಂದ್ರ ಸರ್ಕಾರದ್ದು, ಉಳಿದ 10% ರಷ್ಟನ್ನು ಮೈಸೂರು ಸರ್ಕಾರವೂ ಬ್ರಿಟನ್ನಿನ ಕಂಪನಿಯೂ ಪಾಲುಗೊಂಡಿವೆ. ಎಲ್ಲ ಬಗೆಯ ದೂರವಾಣಿಗಳನ್ನೂ (ಟೆಲಿಫೋನ್ಸ್). ತತ್ಸಬಂಧಿ ಉಪಕರಣಗಳನ್ನೂ ಬಹುದೂರದ ವಾಹಕ ಸಲಕರಣೆಯನ್ನೂ (ಲಾಂಗ್-ಡಿಸೈನ್ಸ್ ಕ್ಯಾರಿಯರ್ ಎಕ್ವಿಪ್‍ಮೆಂಟ್) ಈ ಕಾರ್ಖಾನೆ ತಯಾರಿಸುತ್ತದೆ. 1966-67ರಲ್ಲಿ 2,22,000 ಟೆಲಿಫೋನ್ ಉಪಕರಣಗಳನ್ನೂ ರೂ. 1.23 ಲಕ್ಷದಷ್ಟು ಮೌಲ್ಯದ ವಿನಿಮಯ ತಂತಿಗಳನ್ನೂ ತಯಾರಿಸಿದೆ. 1967-68ರಲ್ಲಿ ಈ ಕಾರ್ಖಾನೆಯಿಂದ ಆದ ಒಟ್ಟು ಹುಟ್ಟುವಳಿ ರೂ. 20.5 ಕೋಟಿಗಳೆಂದು ಅಂದಾಜುಮಾಡಿದೆ.
(ನೋಡಿ- ದೂರವಾಣಿ)
(ನೋಡಿ- ಭಾರತದ-ಕೈಗಾರಿಕೆಗಳು)									

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ